         ಮೂಲದೊಡನೆ ಪರಿಶೀಲಿಸಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಆರ್ಡೊವಿಶಿಯನ್ ಸ್ತೋಮ

ಪುರಾತನ ಜೀವಿಯುಗದ (ಪೇಲಿಯೊಜೋಯಿಕ್) (ಸು.230-600 ದಶಲಕ್ಷ ವರ್ಷಗಳವರೆಗೆ ಹಿಂದಿನ ಕಾಲ) ಎರಡನೆಯ ವ್ಯವಸ್ಥೆಯ ಕಲ್ಲುಗಳಿಗೆ ಭೂವಿಜ್ಞಾನದಲ್ಲಿ ಇರುವ ಹೆಸರು. ಕೇಂಬ್ರಿಯನ್ ಅನಂತರ ಆರ್ಡೊವಿಶಿಯನ್ ಮತ್ತು ಇದರ ಅನಂತರ ಸ್ಮೆಲೂರಿಯನ್ ಬರುತ್ತದೆ. ಆರ್ಡೊವಿಶಿಯನ್ ಯುಗದ ಕಾಲ ಸುಮಾರು 425-500 ದಶಲಕ್ಷ ವರ್ಷಗಳಷ್ಟು ಹಿಂದೆ.
19ನೆಯ ಶತಮಾನದ ಆದಿಯಲ್ಲಿ ಹಳೆಯ ಕೆಂಪು ಮರಳು ಶಿಲಾಸ್ತೋಮದ ಕೆಳಗಿನ ಶಿಲೆಗಳನ್ನು ಮಧ್ಯಂತರ ಶಿಲೆಗಳೆಂದು ಪರಿಗಣಿಸಲಾಗಿತ್ತು. 1831ರಲ್ಲಿ ಮರ್ಚಿಸನ್ ಈ ಶಿಲಾಸ್ತೋಮಗಳ ತುದಿಯಿಂದ ಕೆಳಮುಖವಾಗಿ ಪರಿಶೋಧಿಸಿ ದೊರೆತ ಶಿಲೆಗಳನ್ನೆಲ್ಲ ಸೈಲೂರಿಯನ್ ಸ್ತೋಮಗಳಲ್ಲಿ ಸೇರಿಸಿದ. ಅದೇ ಕಾಲದಲ್ಲಿ ಆಡಂ ಸೆಡ್ಜ್‍ವಿಕ್ ಮಧ್ಯಂತರ ಶಿಲಾಸ್ತೋಮಗಳ ತಳದಿಂದ ಮೇಲ್ಮುಖವಾಗಿ ಪರಿಶೋಧಿಸಿ ದೊರೆತ ಶಿಲೆಗಳಿಂದ ಕೇಂಬ್ರಿಯನ್ ಸ್ತೋಮಗಳೆಂದು ಹೆಸರಿದೆ. ಮರ್ಚಿಸನ್ ಸೈಲೂರಿಯನ್ ಸ್ತೋಮದ ಅಂತ್ಯಭಾಗವಾಗಿ ಸೇರಿಸಿದ್ದ, ಇದರಿಂದ ಕೇಂಬ್ರಿಯನ್-ಸೈಲೂರಿಯನ್ ಸೀಮಾ ಸಮಸ್ಯೆ ಉಂಟಾಯಿತು. 1879ರಲ್ಲಿ ಲ್ಯಾಪ್‍ವರ್ತ್ ಒಂದು ರಾಜೀಸೂತ್ರ ಮುಂದಿಟ್ಟ. ಸೆಡ್ಜ್‍ವಿಕ್- ಮರ್ಜಿಸನ್ ಮಧ್ಯೆ ವಿವಾದಕ್ಕೆ ಎಡೆಗೊಟ್ಟ ಶಿಲೆಗಳನ್ನು ಕೇಂಬ್ರಿಯನ್ ಮತ್ತು ಸೈಲೂರಿಯನ್ ಎರಡರಿಂದಲೂ ಬೇರ್ಪಡಿಸಿ ಅವುಗಳಿಗೆ ಆರ್ಡೊವಿಶಿಯನ್ ಸ್ತೋಮಗಳು ಎಂದು ಹೆಸರಿಟ್ಟ. ಹೀಗೆ ಮಧ್ಯಂತರ ಸ್ತೋಮಗಳನ್ನು ಕೇಂಬ್ರಿಯನ್, ಆರ್ಡೊವಿಶಿಯನ್ ಮತ್ತು ಸೈಲೂರಿಯನ್ ಎಂಬ ಮೂರು ಭಾಗಗಳನ್ನಾಗಿ ವಿಭಜಿಸುವ ಸೂತ್ರಕ್ಕೆ ಎಲ್ಲೆಲ್ಲಿಯೂ ಮನ್ನಣೆ ದೊರೆತಿದೆ. ಆದರೆ ಜರ್ಮನಿಯಲ್ಲಿ ಆರ್ಡೊವಿಶಿಯನ್ ಸ್ತೋಮಗಳನ್ನು ಈಗಲೂ ಸೈಲೂರಿಯನ್ ಸ್ತೋಮದ ಕೆಳ ಭಾಗವೆಂದು ಕರೆಯಲಾಗುತ್ತಿದೆ. 

ಆರ್ಡೊವಿಶಿಯನ್ ಸ್ತೋಮದ ಎಲ್ಲೆಗಳು ಅಷ್ಟು ಖಚಿತವಾಗಿಲ್ಲ. ಬ್ರಿಟಿಷ್ ಭೂವಿಜ್ಞಾನಿಗಳು ಈ ಸ್ತೋಮಗಳ ಕೆಳ ಎಲ್ಲೆಯನ್ನು ಟ್ರಿಮಡಾಕ್ ಶಿಲೆಗಳ ಮೇಲೆ ಎಳೆಯುತ್ತಾರೆ. ಈ ಶಿಲೆಗಳ ಅನುರೂಪತೆಯೇ ಇಂಥ ನಿರ್ಧಾರಕ್ಕೆ ಆಧಾರ. ಹೀಗೆ ಬ್ರಿಟಿಷ್ ದ್ವೀಪಗಳಲ್ಲಿ ಅರ್ಡೊವಿಶಿಯನ್ ಸ್ತೋಮ ಟ್ರಿಮಡಾಕ್ ಶಿಲೆಗಳ ಅನಂತರ ಪ್ರಾರಂಭವಾಗಿ ನಿಯೊಬೆ ಮತ್ತು ಮಲೊಮ ಎಂಬ ವಿಶಿಷ್ಟ ಟ್ರೈಲೊಬೈಟ್‍ಗಳ ಅವಶೇಷ್‍ಗಳಿಂದ ಕೂಡಿದೆ, ಆದರೆ ಟ್ರಿಮಡಾಕ್ ಶಿಲೆಗಳ ಮೇಲ್ಪದರಗಳಲ್ಲಿ ಡಿಕ್ಟಿಯೊನೀಮ ಫಾಬೆಲಿಪಾರ್ಮೆ ಎಂಬ ಗ್ರಾಪ್ಟೊಲೈಟ್ ಪ್ರಾಣಿಗಳ ಅವಶೇಷಗಳಿವೆ. ಸ್ಕಾಂಡಿನೇವಿಯ ಮತ್ತು ಯೂರೋಪ್ ಖಂಡಭಾಗಗಳಲ್ಲಿ ಡಿಕ್ಟಿಯೊನೀಮ ಇರುವ ಪದರುಗಳನ್ನು ಆರ್ಡೊವಿಶಿಯನ್ ಪದರಗಳಲ್ಲಿ ಸೇರಿಸಲಾಗಿದೆ. 

ಉತ್ತರ ಅಮೆರಿಕಾದದಲ್ಲಿ ಪ್ರಿಕೇಂಬ್ರಿಯನ್ ಕಾಲದ ಅನಂತರ, ಅರ್ಡೊವಿಶಿಯನ್ ಕಾಲದ ಮಧ್ಯಭಾಗದಲ್ಲಿ ಗಮನಾರ್ಹ ಜ್ವಾಲಾಮುಖಿ ಕಾರ್ಯಾಚರಣೆ ನಡೆಯಿತು. ಜ್ವಾಲಾಮುಖಿಗಳು ಬೂದಿಯನ್ನು ಹೊರಚೆಲ್ಲಿದವು. ಈ ಬೂದಿ ಸಾಗರ ನಿಕ್ಷೇಪಗಳ ಮಧ್ಯೆ ನೆಲೆನಿಂತು ಬೆಂಟೊನೈಟ್ ಶಿಲೆಗಳಾಗಿ ಮಾರ್ಪಟ್ಟಿರುತ್ತದೆ. ಆರ್ಡೊವಿಶಿಯನ್ ಕೊನೆಯ ಕಾಲದಲ್ಲಿ ಭೂಚಲನೆಯೂ ಉಂಟಾಯಿತು. ಕೇಂಬ್ರಿಯನ್ ಮತ್ತು ಆರ್ಡೊವಿಶಿಯನ್ ಶಿಲೆಗಳು ಈ ಚಲನೆಗೆ ಸಿಕ್ಕ ಪರ್ವತಗಳ ರೂಪದಲ್ಲಿ ಮೇಲೆ ಒಗೆಯಲ್ಪಟ್ಟಿವೆ. ಈ ಭೂ ಚಲನೆಯನ್ನು ಟಕೋನಿಯನ್ ಪ್ರಳಯ ಕಾಲವೆಂದು ಕರೆಯಲಾಗಿದೆ.

ಬ್ರಿಟಿಷ್ ದ್ವೀಪಗಳಲ್ಲಿ ಈ ಕಾರ್ಯ ಆರ್ಡೊವಿಶಿಯನ್ ಕಾಲದ ಆದಿಯಲ್ಲೇ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಶಿಲೆಗಳಲ್ಲಿ ತೀವ್ರತರ ಮಡಿಕೆಗಳುಂಟಾಗಿರುವುದೇ ಅಲ್ಲದೆ, ನಿಕ್ಷೇಪಕಾರ್ಯವೂ ನಿಂತುಹೋಗಿರುತ್ತದೆ. ಈ ಮಡಿಕೆಗಳು ಈಶಾನ್ಯ-ನೈಋತ್ಯಾಭಿಮುಖವಾಗಿದ್ದು, ಸೈಲೂರಿಯನ್ ಕಾಲದ ಅಂತ್ಯದಲ್ಲಿ ನಡೆದ ಕಲೆಡೋನಿಯನ್ ಭೂಚಲನೆಯನ್ನು ಮುನ್ಸೂಚಿಸುತ್ತದೆ. ಬ್ರಿಟಿಷ್ ದ್ವೀಪಗಳಲ್ಲಿ ಜ್ವಾಲಾಮುಖಿ ಕಾರ್ಯಾಚರಣೆ ಎರಡು ಹಂತಗಳಲ್ಲಿ ನಡೆದಿದೆ. ಮೊದಲನೆಯದು ಲೇನೊವಿರ್ನಿಯನ್ ಕಾಲದಲ್ಲಿ. ಇದು ಮುಖ್ಯವಾಗಿ ದಕ್ಷಿಣ ಭಾಗಕ್ಕೆ ಮಿತಿಗೊಂಡಿದೆ. ಗ್ರೀನ್‍ಸ್ವೋನ್ ಮತ್ತು ಪೆಲ್ಸೈಟ್‍ಗಳು ಇಲ್ಲಿನ ಮುಖ್ಯ ಜ್ವಾಲಾಮುಖಿ ಶಿಲೆಗಳು. ಈ ಶಿಲೆಗಳಿಗೆ ಸ್ಪಿಲಿಟಿಕ್ ಶಿಲಾ ವರ್ಗವೆಂದು ಹೆಸರು. ಶಿಲಾರಸದ ಉಗುಳುವಿಕೆಯಿಂದ ನಿಕ್ಷೇಪ ಪ್ರದೇಶಗಳ ತಳ ಕುಸಿಯತೊಡಗಿತು. ಎರಡನೆಯ ಲ್ಯಾಂಡೈಲೊ ಕಾಲದಲ್ಲಿ ಪ್ರಾರಂಭವಾಗಿ ಬಾಲಾ ಕಾಲದ ಆದಿಯಲ್ಲಿ ಕೊನೆಗೊಂಡಿತು. ಈ ಕಾಲದಲ್ಲಾದ ಜ್ವಾಲಾಮುಖಿಜ ಶಿಲೆಗಳಿಗೆ ಆಂಡೆಸಿಟಿಕ್ ಅಥವಾ ಪೆಸಿಪಿಕ್ ಶಿಲಾವರ್ಗವೆಂದು ಹೆಸರು. ಈ ಕಾರ್ಯಾಚರಣೆ ಶಿಲೆಯನ್ನು ಸ್ತರಭಂಗಗೊಳಿಸಿ, ಬೇರ್ಪಟ್ಟ ಶಿಲಾಭಾಗಗಳು ಬಹುದೂರ ನುಣುಚಿ ಹೋಗುವಂತೆ ಮಾಡಿದೆ. ಈ ಕಾಲದ ಅಂತ್ಯದಲ್ಲಿ ವಿಶೇಷ ಭೂಚಲನೆಯುಂಟಾಗಿ, ವಿಶಾಲ ಭೂಪ್ರದೇಶಗಳು ನಿರ್ಮಾಣವಾದವು.

ಅರ್ಡೊವಿಶಿಯನ್ ಕಾಲದಲ್ಲಿ ಸಾಗರಗಳು ವಿಶಾಲವಾಗಿಯೂ ಭೂಭಾಗಗಳು ಕಿರಿದಾಗಿಯೂ ಇದ್ದುದರಿಂದ ಸಾಗರಾಂತರ ವಾಯುಗುಣವಿದ್ದಿರಬೇಕೆಂದು ಹೇಳಬಹುದು. ಈ ವಾಯುಗುಣ ಸಮಶೀತೋಷ್ಣವಾಗಿ ಇದ್ದಿರಬೇಕು; ಏಕೆಂದರೆ ಉತ್ತರ ಅಮೆರಿಕದ ಶೀತಲವಯ ಪ್ರದೇಶಗಳಲ್ಲಿ ಸಹ, ಸಾಮೂಹಿಕವಾಗಿ ಹವಳಗಳಿರುವುದು ಕಂಡುಬಂದಿದೆ. ಪ್ರಪಂಚದ ನಾನಾಕಡೆಗಳಲ್ಲಿ ಸುಣ್ಣಶಿಲೆ, ಡಾಲೊಮೈಟ್ ಮತ್ತು ಕೆಲವು ಜೀವ್ಯವಶೇಷಗಳನ್ನೊಳಗೊಂಡ ಶಿಲೆಗಳು ಇರುವ ಪ್ರಯುಕ್ತ, ಪ್ರಪಂಚದಲ್ಲೆಲ್ಲ ಏಕ ರೀತಿಯ ವಾಯುಗುಣವಿದ್ದಿರಬೇಕೆಂದು ಹೇಳಬಹುದು.

ಈ ಕಾಲದಲ್ಲಾದ ಭೂಚಲನೆಗಳು ಮತ್ತು ಪರ್ವತಗಳ ಅವತರಣಿಕೆ ನಿಕ್ಷೇಪ ಕಾರ್ಯಗಳಲ್ಲೂ ಭೂ ಮತ್ತು ಜಲಸನ್ನಿವೇಶಗಳ ಮೇಲೂ ಸಾಕಷ್ಟು ಪ್ರಭಾವ ಬೀರಿವೆ. ಇದರಿಂದ ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಲು ಅಡ್ಡಿಯುಂಟಾಯಿತು. ಆದ್ದರಿಂದ ಈ ಕಾಲದ ನಿಕ್ಷೇಪಗಳಲ್ಲಿ ವಿವಿಧ ಮುಖಗಳುಂಟಾದವು. ಅವುಗಳಲ್ಲಿ ಮುಖ್ಯವಾದವು ಎರಡು. ಒಂದನೆಯದು ಸಾಗರ ಆಳದ ನಿಕ್ಷೇಪ ಮುಖ್ಯವಾಗಿ ಜೇಡಿನಿಂದ ಕೂಡಿ, ಗ್ರಾಪ್ಟೊಲೈಟ್ ಅವಶೇಷಗಳನ್ನು ಹೊಂದಿವೆ. ಎರಡನೆಯದು ತೀರ ನಿಕ್ಷೇಪ. ಇದು ಮರಳುಶಿಲೆ ಅಥವಾ ಸುಣ್ಣಶಿಲೆಗಳಿಂದ ಕೂಡಿದೆ. ಕೆಲವು ಕಡೆ ಅವೆರಡೂ ಕೂಡಿ ಇರುವುದೂ ಉಂಟು. ಇದರಲ್ಲಿ ಗ್ರಾಪ್ಟೊಲೈಟ್‍ಗಳ ಅವಶೇಷಗಳಿರುವುದಿಲ್ಲ; ಟ್ರೈಲೊಬೈಟ ಮತ್ತು ಬ್ರೇಕಿಯೊಪೋಡಗಳ ಅವಶೇಷಗಳೇ ಹೆಚ್ಚಾಗಿವೆ.

ಮರ್ಚಿಸನ್ ವೊತ್ತಮೊದಲಿಗೆ ಪರಿಶೋಧಿಸಿದ ಪ್ರೋಪ್‍ಪೈರ್ ಮತ್ತು ವೇಲ್ಸ್ ಪ್ರದೇಶಗಳಲ್ಲಿ ಆರ್ಡೊವಿಶಿಯನ್ ಸ್ತೋಮದ ಶಿಲಾಪರಂಪರೆ ಕೆಳಕಂಡಂತೆ ಇರುವುದು:

ಚಿಕ್ಕ ಕ್ಲೈಮಕೊಗ್ರಾಪ್ಟಿಡ್ಸ್
ಡೈಸೆಲೊಗ್ರ್ಯಾಪ್ಟಸ್ ಅನ್ಸೆಪ್ಸ್	ಆಶ್‍ಗಿಲಿಯನ್
ಬಾಲಾ ಅಥವಾ				ಡೈಸೆಲೊಗ್ರ್ಯಾಪ್ಪಸ್ ಕಂಪ್ಲನೇಟಸ್
ಕರಡಾಕ್ 				ಪ್ಲೂರೊಗ್ರ್ಯಾಪ್ಟಸ್ ಲಿನಿಯಾರಿಸ್
	ಡೈಕ್ರನೊಗ್ರ್ಯಾಪ್ಟಸ್ ಎಲಿಂಗಿನಿ	ಕರಡೋಸಿಯನ್
ಕೈಮಕೊಗ್ರ್ಯಾಪ್ಟಸ್‍ವಿಲ್ಸೊನಿ 
ಕೈಮಕೊಗ್ರ್ಯಾಪ್ಟಸ್ ಪೆಲ್ಟಿಫೆರ್
ಲ್ಯಾಂಡೈಲೊ ಅಥವಾ			ನೆಮಗ್ರ್ಯಾಪ್ಟಸ್ ಗ್ರೆಸಿಲಿಸ್			ಲ್ಯಾಂಡೆಲಿಯನ್
ಗ್ಲೆನ್‍ಕಿಲ್ನ್ 				ಗಿಪ್ಟೊಗ್ರ್ಯಾಪ್ಟಸ್ ಟೆರೆಟಿಯಸ್ಕುಲಸ್
ಡಿಡಿವೊಗ್ರ್ಯಾಪ್ಟಸ್ ಮರ್ಚಿಸೋನಿ		ಲ್ಯಾನೃರಿಯನ್
ಅರನಿಗ್ ಅಥವಾ 		ಡಿಡಿವೊಗ್ರ್ಯಾಪ್ಟಸ್ ಬೈಪಿಡಸ್
ಸ್ಕಿದ್ದವಿಯನ್ 				ಡಿಡಿವೊಗ್ರ್ಯಾಪ್ಟಸ್ ಹಿರುಂಡೊ		ಅರೆನಿಗಿಯನ್
ಡಿಡಿವೊಗ್ರ್ಯಾಪ್ಟನ್ ಎಕ್ಸೆಟೆನ್ಸಸ್

ಉತ್ತರ ಅಮೆರಿಕದಲ್ಲಿ ಕೇಂಬ್ರಿಯನ್ ಯುಗದ ಅಂತ್ಯದಲ್ಲಿ ಸಾಗರಗಳು ಭೂಭಾಗಗಳಿಂದ ನಿರ್ಗಮಿಸಿದವು. ಆದರೆ ಈ ನಿರ್ಗಮನವಾದ ಸ್ವಲ್ಪ ಕಾಲದಲ್ಲಿಯೇ ಅಂದರೆ ಆರ್ಡೊವಿಶಿಯನ್ ಕಾಲದ ಆದಿಯಲ್ಲಿ ಭೂಭಾಗದ ಮೇಲೆ ಸಾಗರಾಕ್ರಮಣವಾಯಿತು. ಈ ಬಾರಿ ಕೇಂಬ್ರಿಯನ್ ಕಾಲದಲ್ಲಿದ್ದ ಕಾರ್ಡಿಲೆರಾನ್ ಮತ್ತು ಅಪಲೇಷಿಯನ್ ನಿಕ್ಷೇಪ ಪ್ರಾಂತ್ಯಗಳನ್ನಷ್ಟೇ ಅಲ್ಲದೆ ಅವುಗಳನ್ನು ಬೇರ್ಪಡಿಸಿದ್ದ ಕ್ಯಾಸ್ಕಡಿಯನ್ ಭೂಭಾಗವನ್ನು ಸಾಗರಗಳು ಆಕ್ರಮಿಸಿಕೊಂಡವು. ಆದರೆ ಪೂರ್ವಭಾಗದಲ್ಲಿ ಅಪಲೇಶಿಯನ್ ಪ್ರಾಂತವೊಂದನ್ನುಳಿದು ಮಿಕ್ಕ ಕಡೆಗಳಲ್ಲಿ, ಆರ್ಡೊವಿಶಿಯನ್ ಮಧ್ಯಭಾಗದಲ್ಲಿ ಈ ಆಕ್ರಮಣ ತೆರವು ಮಾಡಲ್ಪಟ್ಟಿತು. ಅರ್ಡೊವಿಶಿಯನ್ ಅಂತ್ಯಕಾಲದಲ್ಲಿ ಉಳಿದ ಸಾಗರ ಸ್ವಲ್ಪಸ್ವಲ್ಪವಾಗಿ ವಿಸ್ತಾರಗೊಂಡು ಕೊನೆಗೆ ಸುಮಾರು 2/3 ಖಂಡಭಾಗವನ್ನು ಆಕ್ರಮಿಸಿತು. ಆಕಾಲದಲ್ಲಿದ್ದ ಭೂಭಾಗಗಳೆಂದರೆ ಗಡಿ ಪ್ರಾಂತ್ಯಗಳಾದ ಕ್ಯಾಸ್ಕಡಿಯ, ಅಪಲೇಶಿಯ ಲ್ಯಾವೊರಿಯ ಮತ್ತು ಕೆಲವು ನಡುಗಡ್ಡೆ ದ್ವೀಪಗಳು. ಸಾಗರಕ್ರಮಗಳ ಮತ್ತು ನಿರ್ಗಮನಗಳ ಆಧಾರದ ಮೇಲೆ ಆರ್ಡೊವಿಶಿಯನ್ ಸ್ತೋಮವನ್ನು ಮೂರು ಭಾಗಗಳನ್ನಾಗಿ ವಿಭಜಿಸಬಹುದು.

ಮೇಲ್ಭಾಗ ಅಥವಾ ಸಿನ್ಸಿನೇಟಿಯನ್
ಆರ್ಡೊವಿಶಿಯನ್ ಸ್ತೋಮ	ಮಧ್ಯಭಾಗ ಅಥವಾ ಚಂಪ್ಲನಿಯನ್
ಕೆಳಭಾಗ ಅಥವಾ ಕೆನಡಿಯನ್

ಆರ್ಡೊವಿಶಿಯನ್ ಕಾಲದ ಜೀವವರ್ಗಗಳಲ್ಲಿ ಅನೇಕ ವಿಶಿಷ್ಟ ಅಂಶಗಳಿವೆ. ಕೇಂಬ್ರಿಯನ್ ಇಂದ ಆರ್ಡೊವಿಶಿಯನ್‍ವರೆಗೆ ಮತ್ತು ಆರ್ಡೊವಿಶಿಯನ್‍ನಿಂದ ಸೈಲೂರಿಯನ್‍ವರೆಗೆ ಬದಲಾವಣೆಗಳು ಹಂತಹಂತದಲ್ಲಿ ಆಗಿರುತ್ತವೆ. ಆರ್ಡೊವಿಶಿಯನ್ ಜೀವವರ್ಗಗಳಲ್ಲಿ ಟ್ರೈಬೊಲೈಟಗಳು, ಸಾದಾ ಕೀಲುಳ್ಳ ಬ್ರೇಕ್ರಿಯೋಪೋಡಗಳು ಮತ್ತು ದ್ವಿಪಂಕ್ತಿ ಹಾಗೂ ಕವಲು ಗ್ರ್ಯಾಪ್ಟೊಲೈಟ್‍ಗಳು ಅಗ್ರಗಣ್ಯವಾದವುಗಳು. ಕೇಂಬ್ರಿಯನ್ ಕಾಲದಲ್ಲಿ ಉನ್ನತಮಟ್ಟಕ್ಕೇರಿದುವು; ಆದರೆ ಈ ಕಾಲದ ಅಂತ್ಯದಲ್ಲಿಯೇ ಅವುಗಳ ಅವನತಿಯೂ ಪ್ರಾರಂಭವಾಯಿತು. ಈ ಕಾಲದ ಕೆಲವು ಟ್ರೈಲೊಬೈಟ್‍ಗಳು ದೇಹದ ಕೆಳಭಾಗವನ್ನು ರಕ್ಷಿಸಿಕೊಳ್ಳಲು ಸುರುಳಿ ಸುತ್ತಿಕೊಳ್ಳುತ್ತಿದ್ದವು. ಅವು ಅವಸ್ಥೆಯಲ್ಲಿಯೇ ರಕ್ಷಿಸಲ್ಪಟ್ಟಿವೆ. ಟ್ರೈನ್ಯೂಕ್ಲಿಯಸ್ ಮತ್ತು ಅಸಪಸ್‍ಗಳು ಈ ಕಾಲದ ವಿಶಿಷ್ಟ ಟ್ರೈಲೊಬೈಟಗಳು ಆರ್ಡೊವಿಶಿಯನ್ ಕಾಲದ ತೀರನಿಕ್ಷೇಪಗಳನ್ನು ಶಿಲಾಪದರಗಳನ್ನಾಗಿ ವಿಭಜಿಸಲು ಟ್ರೈಲೊಬೈಟ್‍ಗಳು ಸಹಕಾರಿಯಾಗಿವೆ. ಎಗ್ಲಿನ ಮತ್ತು ರೆಮೊಪ್ಲೂರಿಡೆ ಎಂಬ ವಿಚಿತ್ರ ಟ್ರೈಲೊಬೈಟ್‍ಗಳು  ಈ ಸ್ತೋಮಕ್ಕೆ ಮಾತ್ರ ಸೀಮಿತಗೊಂಡಿವೆ. ಅಗ್ನಾಸ್ಟಿಡೆ, ಕ್ಯಾಲಿಮಿನಿಡೆ, ಇಲ್ಲೆನಿಡೆ, ಹೋಮೊಡಾಂಟಿಡೆ ಮೊದಲಾದ ದೀರ್ಘಾವಧಿ ಟ್ರೈಲೊಬೈಟ್‍ಗಳೂ ಈ ಕಾಲದಲ್ಲಿದ್ದವು. ಅಸ್ಟ್ರಕೋಡ ಪ್ರಾಣಿಗಳು ಈ ಕಾಲದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡುದು ಒಂದು ವಿಶೇಷ.
ಗ್ರ್ಯಾಪ್ಟೊಲೈಟ್‍ಗಳು ಈ ಕಾಲದ ಜೀವವರ್ಗಗಳಲ್ಲಿ ಅತಿ ಮುಖ್ಯವಾದವು. ಜೇಡು ನಿಕ್ಷೇಪಗಳನ್ನು ಇವುಗಳ ಆಧಾರದ ಮೇಲೆ ಅನೇಕ ಶಿಲಾಪಾದಗಳನ್ನಾಗಿ ವಿಭಜಿಸಲಾಗಿದೆ. ಗ್ರ್ಯಾಪ್ಟೊಲೈಟ್‍ಗಳು ತೇಲುವ ಸ್ವಭಾವದವುಗಳಾದುದರಿಂದ ಪ್ರಪಂಚದ ನಾನಾ ಕಡೆಯ ಶಿಲೆಗಳಲ್ಲಿ ಇವುಗಳ ಕೆಲವು ಪ್ರಕಾರಗಳು ಕಂಡುಬರುತ್ತವೆ. ಇದರಿಂದ ಪ್ರಪಂಚದ ಜೇಡು ನಿಕ್ಷೇಪಗಳನ್ನೆಲ್ಲ ಸರಿದೂಗಿಸಲು ಸಾಧ್ಯವಾಗಿದೆ.

ಆರ್ಥಿಸ್ ಮತ್ತು ಸ್ರ್ಟೊಪೊಮಿನಿಡ್ಸ್‍ಗಳು ಈ ಕಾಲದ ಮುಖ್ಯ ಬ್ರೇಕಿಯೋಪೋಡಗಳು. ಸುಣ್ಣ ಮತ್ತು ಮರಳು ನಿಕ್ಷೇಪಗಳಲ್ಲಿ ಲೆಮಲಿ ಬ್ರ್ಯಾಂಕ್ಸ್, ಶಂಖಗಳು, ಕೆಪಲೊಪೋಡಗಳು, ಬ್ರಿಯೋಜೋವನ್ಸ್ ಸಿಸ್ಟಿಡ್ ಮತ್ತು ರೂಗೋಸ್ ಹವಳಗಳು ಅಲ್ಲಲ್ಲಿ ನಿಬಿಡವಾಗಿ ಬೀಡು ಬಿಟ್ಟಿದ್ದವು. ಹವಳದಲ್ಲಿ ಆಲ್ಸಿಯೊನೇರಿಯ, ಟ್ಯಾಬುಲೇಟ ಮತ್ತು ರೂಗೋಸವರ್ಗಗಳು ಉದಯಿಸಿ ಉನ್ನತಮಟ್ಟಕ್ಕೆರಿದವು. 1891ರಲ್ಲಿ ವಾಲ್ಕಾಟ್ ಕೊಲೆರೇಡ್ ಹತ್ತಿರ ಹಾರ್ಡಿಂಗ್ ಮರಳುಶಿಲೆಯಲ್ಲಿ ಆಸ್ಟ್ರಕೊಡರ್ಮ ಜಾತಿಯ ಮೀನುಗಳ ಫಲಕಗಳನ್ನು ಗುರುತಿಸಿ ವರದಿಮಾಡಿದರು. ಅನಂತರ ಅಮೆರಿಕಾ ಸಂಯುಕ್ತಸಂಸ್ಥಾನಗಳ ಬ್ಲಾಕ್‍ಹಿಲ್ ಮತ್ತು ಬಿಗ್‍ಹಾರ್ನ ಪರ್ವತಪ್ರದೇಶಗಳಲ್ಲಿ ಮೀನು ಪಲಕಗಳ ವಿಚಾರವಾಗಿ ವರದಿಮಾಡಲಾಗಿದೆ.

ಆರ್ಡೊವಿಶಿಯನ್ ಸ್ತೋಮಗಳು ಸ್ಪಿಟಿ ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಹೊರಕಂಡಿವೆ. ಸ್ಪಿಟಿ ಪ್ರದೇಶಗಳಲ್ಲಿ ಈ ಶಿಲಾಸಮುದಾಯ ಹೈಮಂತ ಶಿಲಾಸಮುದಾಯದ ಮೇಲೆ ನಿಕ್ಷೇಪಗೊಂಡಿದೆ. ಇದರ ಕೆಳಭಾಗ ಬೆಣಚುಶಿಲೆ, ಮರಳುಶಿಲೆ ಮತ್ತು ಗ್ರಿಟ್ ಶಿಲೆಗಳಿಂದಲೂ ಮೇಲ್ಭಾಗದ ಸುಣ್ಣಶಿಲೆಯಿಂದಲೂ ಕೂಡಿದೆ. ಈ ಶಿಲಾ ಸಮುದಾಯದಲ್ಲಿ ಜೀವ್ಯವಶೇಷಗಳು ಯಥೇಚ್ಛವಾಗಿ ಸಿಕ್ಕುತ್ತವೆ. ಅವುಗಳಲ್ಲಿ ಬ್ರೇಕಿಯೋಪೋಡ ಹೇರಳವಾಗಿಯೂ ಟ್ರೈಲೊಬೈಟ್‍ಗಳು ಅಷ್ಟು ಹೆಚ್ಚಿಲ್ಲದೆ ಸ್ವಲ್ಪ ಕಡಿಮೆ ಪ್ರಮಾಣದಲ್ಲೂ ಮೊಲಸ್ಕಗಳು ಅಪೂರ್ವವಾಗಿಯೂ ಪ್ರತಿನಿಧಿಸಲ್ಪಟ್ಟಿವೆ.			
(ಡಿ.ಆರ್.)